ಕಾನೂನು ಪ್ರಕಾರ ಮುಖ್ಯಾಧಿಕಾರಿಗಳು ಮಾಡುತ್ತಿರುವ ಕೆಲಸ ಸಹಿಸಲಾಗುತ್ತಿಲ್ಲ : ನಾಯಕ
ಲಿಂಗಸುಗೂರು : ಕೋವಿಡ್ ಸಂಕ್ರಮಣ ಕಾಲದಲ್ಲಿಯೂ ಕಾನೂನು ಪ್ರಕಾರವಾಗಿಯೇ ಪುರಸಭೆ ಮುಖ್ಯಾಧಿಕಾರಿಗಳು ಮಾಡುತ್ತಿರುವ ಕೆಲಸವನ್ನು ಸಹಿಸದೇ ಅದ್ಯಕ್ಷ-ಉಪಾದ್ಯಕ್ಷರಾದಿಯಾಗಿ ಕೆಲ ಸದಸ್ಯರು ವೃಥಾ ಆರೋಪ ಮಾಡುತ್ತಿರುವುದಲ್ಲದೇ, ಶಾಸಕರನ್ನು ಪುರಸಭೆ ಸಭಾಂಗಣಕ್ಕೆ ಕರೆಯಿಸಿ ಮುಖ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳುವಂತೆ ವ್ಯವಸ್ಥೆ ರೂಪಿಸಿರುವುದು ಖಂಡನೀಯವೆಂದು ಪುರಸಭೆಯ ವಿರೋಧ ಪಕ್ಷದ ನಾಯಕ ಮುದುಕಪ್ಪ ನಾಯಕ ಹೇಳಿದರು.
ಬುಧವಾರ ಶಾಸಕ ಡಿ.ಎಸ್.ಹೂಲಗೇರಿಯವರು ಪುರಸಭೆ ಕಚೇರಿಗೆ ಭೇಟಿ ನೀಡಿದ್ದ ಘಟನೆ ಬಗ್ಗೆ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಭಾಂಗಣದಲ್ಲಿ ಮುಖ್ಯಾಧಿಕಾರಿಗಳಿಗೆ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ್ದು ಸರಿಯಷ್ಟೆ. ಆದರೆ, ಅಧಿಕೃತವಾಗಿ ಸದಸ್ಯರಲ್ಲದವರನ್ನೂ ಸಭಾಂಗಣದಲ್ಲಿ ಕೂಡಿಸಿ ಅವರ ಮುಂದೆ ಅಧಿಕಾರಿಯ ತೇಜೋವಧೆಗೆ ಮುಂದಾಗಿರುವುದು ಸಮಂಜಸವಲ್ಲ. ಪುರಸಭೆಗೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರು ಬಂದಾಗಿನಿಂದ ನಿಯಮಾನುಸಾರ ಕೆಲಸಗಳು ನಡೆಯುತ್ತಿವೆ. ಇಲಾಖೆಯ ನಿರ್ದೇಶನ, ಸೂಚನೆಯಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ಪರಿಣಾಮ ಪುರಸಭೆಯಲ್ಲಿ ಮಧ್ಯವರ್ತಿಗಳಿಗೆ ಕೆಲಸ ಇಲ್ಲದಂತಾಗಿದೆ.
ಮಧ್ಯವರ್ತಿಗಳು ಮುಖ್ಯಾಧಿಕಾರಿಗಳ ವಿರುದ್ಧ ವೃಥಾ ಆರೋಪ ಮಾಡುತ್ತಾ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಗುಂಪಾಗಿ ಸೇರಿಕೊಂಡು ಬರುವುದು ಸರಿಯಾದ ಕ್ರಮವಲ್ಲ ಎಂದು ನಾಯಕ ಹೇಳಿದರು.

