ಮೈಸೂರಿನಲ್ಲಿ ಫಿಲಂಸಿಟಿ ನಿರ್ಮಾಣಕ್ಕೆ ಸಿದ್ಧತೆ : ಸಚಿವ ಸಿಸಿ ಪಾಟೀಲ್
ಲಿಂಗಸುಗೂರು : ಕನ್ನಡ ಸಿನಿಮಾರಂಗದ ಮೇರುನಟ
ದಿ.ಡಾ.ರಾಜಕುಮಾರ ಅವರ ಕನಸಿನಂತೆ ಮೈಸೂರಿನಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಫಿಲಂಸಿಟಿಯನ್ನು ನಿರ್ಮಾಣ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಸಣ್ಣ ಕೈಗಾರಿಕಾ ಹಾಗೂ ವಾರ್ತಾ
ಮತ್ತು ಪ್ರಸಾರ ಖಾತೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದ್ರಾಬಾದ್‍ನ ರಾಮೋಜಿರಾವ್ ಫಿಲಂಸಿಟಿ ಸೇರಿ ದೇಶದ ಇತರೆಡೆ ಇರುವ ಫಿಲಂಸಿಟಿಗಳ ಮಾದರಿಗಳನ್ನು ಅಧ್ಯಯನ ಮಾಡಿ ಅತ್ಯಂತ ಆಧುನಿಕ ತಂತ್ರಜ್ಞಾನ ಇರುವ ಫಿಲಂಸಿಟಿಯನ್ನು ನಿರ್ಮಾಣ ಮಾಡುವ ಮೂಲಕ ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಗ್ರಾಮೀಣ ಪತ್ರಕರ್ತರಿಗೆ ಬಸ್‍ಪಾಸ್ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಈಗಾಗಲೇ ಅರ್ಹರನ್ನು ಗುರುತಿಸುವ ಕಾರ್ಯ ನಡೆದಿದೆ. ಪಾಸ್ ಪಡೆಯಲು ಅರ್ಹರಿರುವ ಎಲ್ಲಾ ಪತ್ರಕರ್ತರಿಗೂ ಶೀಘ್ರವೇ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಮಸ್ಕಿ ಸೇರಿ ರಾಜ್ಯದ ಮೂರು ಕಡೆಗಳಲ್ಲಿ ನಡೆಯುತ್ತಿರುವಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಜಯಭೇರಿ ಬಾರಿಸಲಿದೆ. ಖುದ್ದು ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ಸಂಸದರುಗಳು,
ಶಾಸಕರುಗಳು ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಸರಕಾರದ ಜನಪರ ಸಾಧನೆಗಳನ್ನು ಗುರುತಿಸಿ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಮತದಾರ ಗೆಲ್ಲಿಸಲಿದ್ದಾನೆಂದು ಭವಿಷ್ಯ ನುಡಿದರು.
ಮುಖಂಡರಾದ ಶಂಕರಗೌಡ ಅಮರಾವತಿ, ಸಂತೋಷ
ರಾಜಗುರು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

