ರಾಯಚೂರು

ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಕಳ್ಳಿಲಿಂಗಸುಗೂರಲ್ಲಿ ಚಾಲನೆ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ತಲುಪಿಸುವ ಮಹತ್ವದ ಕಾರ್ಯಕ್ರಮ : ಎಡಿಸಿ

ಲಿಂಗಸುಗೂರು : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆಗಳು, ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ
ಆಯೋಜಿಸಿರುವ ಸರಕಾರದ ಮಹತ್ವದ ಕಾರ್ಯಕ್ರಮ ಇದಾಗಿದ್ದು,ಗ್ರಾಮೀಣ ಪ್ರದೇಶದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ದುರುಗೇಶ್ ಕರೆನೀಡಿದರು.


ತಾಲೂಕಿನ ಕಳ್ಳಿ ಲಿಂಗಸುಗೂರು ಗ್ರಾಮದಲ್ಲಿ ಶನಿವಾರ
ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರದ ಎಲ್ಲಾ ಇಲಾಖೆ ಅಧಿಕಾರಿಗಳು ನಿಗದಿತ
ಗ್ರಾಮಕ್ಕೆ ತೆರಳಿ ಸ್ಥಳದಲ್ಲಿಯೇ ಜನರ ಅಹವಾಲು, ಅರ್ಜಿಗಳನ್ನು ಸ್ವೀಕರಿಸಿ ಅಲ್ಲಿಯೇ ಅವುಗಳನ್ನು ವಿಲೇವಾರಿ ಮಾಡುವ ಕಾರ್ಯಕ್ರಮ ಇದಾಗಿದೆ.


ಬಹುತೇಕ ಸಮಸ್ಯೆಗಳಿಗೆ ಇಲ್ಲಿಯೇ ಪರಿಹಾರ ಕಂಡುಕೊಳ್ಳಲು ಸರಕಾರದ ಸೂಚನೆ ಇದ್ದು, ಜನಸಾಮಾನ್ಯರು ಯಾವುದೇ ರೀತಿಯ
ಸಮಸ್ಯೆಗಳಿದ್ದರೂ ಈ ಕಾರ್ಯಕ್ರಮದಲ್ಲಿ ಪರಿಹಾರ
ಕಂಡುಕೊಳ್ಳಬಹುದೆಂದು ಹೇಳಿದರು.


ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಜಿಲ್ಲೆಯ ಒಂದು ಗ್ರಾಮವನ್ನು ಆಯ್ದುಕೊಂಡು ಅಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡುವದು, ತಾಲೂಕುಗಳಲ್ಲಿ ಆಯಾ ತಹಸೀಲ್ದಾರರು ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಗ್ರಾಮ ವಾಸ್ತವ್ಯ ಮಾಡುವ
ಮೂಲಕ ಜನರಿಗೆ ಸ್ಪಂಧಿಸಬೇಕಿದೆ. ಇದರಿಂದ ಕುಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಮಾತನಾಡಿದರು.


ಜಿಲ್ಲಾಧಿಕಾರಿಗಳೇ ಗೈರು
ವಿಶೇಷವಾಗಿ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ಥಳದಲ್ಲಿಯೇ ನಿರ್ಣಯ ಕೈಗೊಳ್ಳಬೇಕೆಂದು ಸರಕಾರ ಈ ಯೋಜನೆಯ ಮೂಲಕ ಆಡಳಿತವನ್ನು ಗ್ರಾಮೀಣ ಪ್ರದೇಶಕ್ಕೆ ಜನರ ಮನೆ ಬಾಗಿಲಿಗೇ ಕಳುಹಿಸುವ ಪ್ರಯತ್ನ ಮಾಡುತ್ತಿರುವದು ಪ್ರಶಂಸನೀಯ ಕ್ರಮ. ಆದರೆ, ಸ್ಥಳಕ್ಕೆ ಬಂದು ಸ್ಥಳದಲ್ಲಿಯೇ ನಿರ್ಣಯ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿಗಳೇ ಕಾರ್ಯಕ್ರಮದಲ್ಲಿ ಗೈರಾದ ಪರಿಣಾಮ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.


ಸಾಮಾಜಿಕ ಅಂತರ ಮಾಯ ಪಹಣಿ ತಿದ್ದುಪಡಿ, ಭೂದಾಖಲೆ, ಸರ್ವೆ, ಸಂಧ್ಯಾಸುರಕ್ಷಾ,ವಿಧವಾವೇತನ
ಸೇರಿ ಸಾಮಾಜಿಕ ಭದ್ರತೆ ಯೋಜನೆಗಳು, ಶಿಕ್ಷಣ, ಕೃಷಿ, ಅರಣ್ಯ,ಸಮಾಜಕಲ್ಯಾಣ, ಕಂದಾಯ ಸೇರಿ ನಾನಾ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಇದ್ದರು. ಸಾರ್ವಜನಿಕರು ತಮ್ಮ ಅಹವಾಲುಗಳು, ಸಮಸ್ಯೆಗಳ ಬಗ್ಗೆ ಅರ್ಜಿಗಳನ್ನು ನೀಡುವ ವೇಳೆ
ಗೌಜು ಗದ್ದಲ ಉಂಟಾಗಿತ್ತು.

ಮಹಾಮಾರಿ ಕೊರೊನಾ ಇನ್ನೂ ಸಂಪೂರ್ಣವಾಗಿ
ತೊಲಗಿಲ್ಲವಾದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇನ್ನೂ ಅನಿವಾರ್ಯವಾಗಿದೆ. ಆದರೆ, ಈ ಕಾರ್ಯಕ್ರಮದಲ್ಲಿ ಮಾತ್ರ ಅದ್ಯಾವುದೂ ಕಾಣಿಸಲಿಲ್ಲ. ಜನರು ತಮ್ಮ ಅರ್ಜಿಗಳನ್ನು ಸಲ್ಲಿಸಲು,ಸಮಸ್ಯೆಗಳನ್ನು ಹೇಳಲು ಗುಂಪುಗುಂಪಾಗಿ ನಿಂತಿರುವುದು
ಕಂಡುಬಂತು.


ಸಹಾಯಕ ಆಯುಕ್ತ ರಾಜಶೇಖರ ಡಂಬಳ್, ತಹಸೀಲ್ದಾರ್ ಚಾಮರಾಜ ಪಾಟೀಲ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು
ಹಾಗೂ ಸಾರ್ವಜನಿಕರು ಸಭೆಯಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!