ಎಚ್ಚೆತ್ತುಕೊಳ್ಳದ ಅಧಿಕಾರಿಗಳು.. ಗರಂ ಆದ ಸದಸ್ಯರು ತಾ.ಪಂ. ಸಾಮಾನ್ಯ ಸಭೆಯಲ್ಲಿ ಅದೇ ರಾಗ.. ಅದೇ ಹಾಡು..!
ವರದಿ : ಖಾಜಾಹುಸೇನ್
ಲಿಂಗಸುಗೂರು : ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ತಾಲೂಕು ಪಂಚಾಯತ್ ಆಡಳಿತ ಮಂಡಳಿಯ ಕೊನೆಯ ಸಾಮಾನ್ಯ ಸಭೆ ಸ್ಥಳೀಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಐದು ವರ್ಷಗಳಿಂದಲೂ ಕಾಲಕಾಲಕ್ಕೆ ಸಭೆಗಳನ್ನು ಮಾಡುತ್ತಿದ್ದರಾದರೂ, ಪ್ರತಿಯೊಂದು ಸಭೆಗೆ ಬಂದಾಗಲೂ ಅಧಿಕಾರಿಗಳು ಗಿಳಿಪಾಠ ಒಪ್ಪಿಸುವುದು, ಸದಸ್ಯರು ಗರಂ ಆಗುವುದು ಸಾಮಾನ್ಯವಾದಂತಿತ್ತು. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಸರಕಾರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ಬರುತ್ತಿದ್ದಾಗ್ಯೂ, ಇಲಾಖೆಗಳು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ತೋರುತ್ತಿರುವ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಟಿತವಾಗುತ್ತಿದೆ ಎನ್ನುವ ಮಾತುಗಳು ಸಾಮಾನ್ಯವಾಗಿ ಸದಸ್ಯರಲ್ಲಿ ಕೇಳಿ ಬಂದವು. ಸಭೆಯಲ್ಲಿ ಮಾತ್ರ ಕೆಲ ಅಧಿಕಾರಿಗಳ ದರ್ಶನ ಆಗುತ್ತದೆಯೇ ವಿನಃ, ಕಚೇರಿಗೆ ಹೋದಾಗ ಸುತಾರಾಂ ಸಿಗುವುದಿಲ್ಲವೆಂದು ಕೆಲ ಸದಸ್ಯರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕೃಷಿ, ಸಮಾಜಕಲ್ಯಾಣ, ಲೋಕೋಪಯೋಗಿ, ಆರೋಗ್ಯ, ಜಿಲ್ಲಾ ಪಂಚಾಯತ್, ಬಿಸಿಎಂ, ಶಿಕ್ಷಣ, ಕೈಗಾರಿಕೆ, ತೋಟಗಾರಿಕೆ ಸೇರಿ ಹಲವು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಹಂತಹಂತವಾಗಿ ಸಿದ್ಧಪಡಿಸಿದ್ದ ವರದಿಯನ್ನೇ ವಾಚನ ಮಾಡುವುದು ಕಂಡು ಬಂತು. ಇದಕ್ಕೆ ಪ್ರತಿಯಾಗಿ ಸದಸ್ಯರು, ಅಭಿವೃದ್ಧಿಯ ವಿಷಯವಾಗಿ ಚರ್ಚಿಸಲು ಮುಂದಾದಾಗ ಬಹುತೇಕ ಅಧಿಕಾರಿಗಳು ನಿರುತ್ತರರಾದರು.
ಸಭೆಗೆ ಹಾಜರಾಗದ ಕೆಲ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವಂತೆ ಸದಸ್ಯರು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒತ್ತಾಯಿಸಿದರು. ಸದಸ್ಯರ ಒತ್ತಡಕ್ಕೆ ಮನ್ನಣೆ ನೀಡಿದ ಇಒ ಲಕ್ಷ್ಮಿದೇವಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಿದರು.
ತಾಪಂ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ್ ಸಭೆಯ ಅದ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಲ್ಲಮ್ಮ ಗದ್ದೆಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ತಿಪ್ಪಣ್ಣ, ತಾಪಂ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

